ಚಾಲಕ ಮೀನು
	ಪರ್ಕೊಮಾರ್ಫೀ ಅಥವಾ ಪರ್ಸಿಫಾರ್ಮೀಸ್ ಗಣ, ಪರ್ಕಾಯ್‍ಡಿಯ ಉಪಗಣ, ಕೆರಾಂಜಿಡೆ ಕುಟುಂಬಕ್ಕೆ ಸೇರಿದ ಒಂದು ಸಾಗರವಾಸಿ ಮೀನು (ಪೈಲಟ್ ಫಿಷ್). ಇದರ ವೈಜ್ಞಾನಿಕ ಹೆಸರು ನಾಕ್ರೇಟಸ್ ಡಕ್ಟರ್. ಜಾಕ್ ಮತ್ತು ಕುದುರೆ ಮ್ಯಾಕರೆಲುಗಳ ಹತ್ತಿರ ಸಂಬಂಧಿ. ಚಾಲಕ ಮೀನುಗಳು ಅನೇಕ ವೇಳೆ ಹಡಗುಗಳನ್ನು ದೊಡ್ಡ ದೊಡ್ಡ ಶಾರ್ಕ್ ಮೀನುಗಳನ್ನೂ ಹಿಂಬಾಲಿಸಿಕೊಂಡು ಹೋಗುತ್ತವೆ. ಸಮುದ್ರದಲ್ಲಿ ದಾರಿ ತಪ್ಪಿದ ನಾವಿಕರಿಗೆ ಈ ಮೀನುಗಳು ಮಾರ್ಗದರ್ಶನ ಮಾಡಿ ಅವರು ಬಂದರನ್ನು ಸೇರಲು ಸಹಾಯ ಮಾಡುವುವೆಂದು ಪ್ರಾಚೀನ ಗ್ರೀಕರು ನಂಬಿದ್ದರು. ತಿಮಿಂಗಿಲಗಳಿಗೂ ಮಾರ್ಗದರ್ಶಿಗಳಾಗಿದ್ದವೆಂಬ ನಂಬಿಕೆ ಕೂಡ ಇತ್ತು. ಈ ಕಾರಣಗಳಿಂದಾಗಿ ಇವಕ್ಕೆ ಚಾಲಕ ಮೀನುಗಳೆಂದು ಹೆಸರು ಬಂದಿರಬಹುದು. ಆದರೆ ನಿಜಕ್ಕೂ ಶಾರ್ಕ್ ಮತ್ತು ಡಾಲ್ಫಿನುಗಳು ತಮ್ಮ ಆಹಾರವನ್ನು ತಿನ್ನುವಾಗ ತುಂಡರಿಸಿದ ಅಳಿದುಳಿದ ಆಹಾರ ಪದಾರ್ಥಗಳಿಗಾಗಿ ಚಾಲಕ ಮೀನುಗಳು ಅವನ್ನು ಹಿಂಬಾಲಿಸುತ್ತವೆ. ಹಡಗಿನಿಂದ ನೀರಿನೊಳಕ್ಕೆ ಎಸೆಯಲ್ಪಡುವ ಬೇಡದ ಆಹಾರ ಪದಾರ್ಥಗಳ ನಿರೀಕ್ಷೆಯಿಂದ ಇವು ಹಡಗುಗಳನ್ನು ಹಿಂಬಾಲಿಸುತ್ತವೆ. ಆವಶ್ಯಕತೆ ಬಿದ್ದಾಗ ಇವು ತಮ್ಮ ಆಹಾರವಾದ ಸಣ್ಣಸಣ್ಣ ಮೀನುಗಳನ್ನು ಬೇಟೆಯಾಡುತ್ತವೆ.

ಚಾಲಕ ಮೀನು ಸುಮಾರು 70 ಸೆಂ.ಮೀ ಉದ್ದ ಬೆಳೆಯುತ್ತದೆ. ದೇಹದ ಬಣ್ಣ ನೀಲಿ. ದೇಹದ ಅಕ್ಕಪಕ್ಕಗಳಲ್ಲಿ ಬೆನ್ನಿನಿಂದ ಉದರದವರೆಗೆ ವಿಸ್ತರಿಸಿದಂತೆ ಗಾಢ ನೀಲಿಬಣ್ಣದ, ಅಗಲವಾದ 5 ಅಥವಾ 7 ಉದ್ದ ಪಟ್ಟೆಗಳಿವೆ. ಬಾಲದ ಅಕ್ಕಪಕ್ಕದಲ್ಲಿ ಅಡಿಗಟ್ಟಿನಂಥ (ಕೀಲ್) ಒಂದು ಚೂಪಾದ ರಚನೆಯಿದೆ. ಬೆನ್ನಿನ ಈಜುರೆಕ್ಕೆಯ ಮುಂಭಾಗದಲ್ಲಿ ನಾಲ್ಕು ಸಣ್ಣ ಮುಳ್ಳುಗಳು ಉಂಟು. ಹಲ್ಲುಗಳು ಚಿಕ್ಕವು; ಅನೇಕ ಸಾಲುಗಳಲ್ಲಿ ಸ್ಥಿತವಾಗಿವೆ. ಚಾಲಕ ಮೀನುಗಳು ಸಮುದ್ರದಲ್ಲಿ ಮೊಟ್ಟೆಗಳನ್ನಿಡುತ್ತವೆ. ಮರಿ ಮೀನುಗಳಿಗೂ ಪ್ರೌಢ ಮೀನುಗಳಿಗೂ ಆಕಾರ ಮತ್ತು ಬಣ್ಣದಲ್ಲಿ ಸ್ವಲ್ಪವೂ ಹೋಲಿಕೆಯಿರುವುದಿಲ್ಲ. ಮರಿ ಮೀನುಗಳ ದೇಹ ಬಲು ಗಿಡ್ಡ. ಕಣ್ಣುಗಳು ಬಹಳ ದೊಡ್ಡ ಗಾತ್ರದವು; ಅಲ್ಲದೆ ಅವುಗಳ ಸುತ್ತ ಮುಳ್ಳುಗಳಿರುತ್ತವೆ. ಮರಿಮೀನುಗಳು ಸಾಮಾನ್ಯವಾಗಿ ತೇಲಾಡುತ್ತಿರುವ ಸಮುದ್ರದ ಕಳೆ, ಜೆಲಿಮೀನಿನ ದೇಹದ ತಳಭಾಗ ಅಥವಾ ಫೈಸೇಲಿಯದ ಟೆಂಟಕಲುಗಳ ನಡುವೆ ಮರೆಯಾಗಿರುತ್ತವೆ. ಈ ವಿಷಪೂರಿತ ಟೆಂಟಕಲುಗಳಿಂದ ಇವಕ್ಕೆ ಯಾವ ಹಾನಿಯೂ ಆಗುವುದಿಲ್ಲ. ಚಾಲಕ ಮೀನುಗಳು ಆಳವಾದ ನೀರಿನಲ್ಲಿ ವಾಸಿಸುತ್ತವೆ. ಇವು ಪ್ರಪಂಚದ ಉಷ್ಣವಲಯ ಮತ್ತು ಸಮಶೀತೋಷ್ಣವಲಯದ ಸಮುದ್ರಗಳಲ್ಲಿ, ಮೆಡಿಟರೇನಿಯನಿನಲ್ಲಿ ಮತ್ತು ಅಮೆರಿಕದ ಕರಾವಳಿಯಲ್ಲಿ ಕಂಡುಬರುತ್ತವೆ. 

ನೀರಿನ ಮೇಲ್ಭಾಗದಲ್ಲಿರುವುದರಿಂದ ಇವುಗಳನ್ನು ಕೈಬಲೆಗಳ ಸಹಾಯದಿಮದ ಹಿಡಿಯುತ್ತಾರೆ. ಇವುಗಳನ್ನು ತಾಜಾ ಮತ್ತು ಒಣಗಿಸಿದ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ.
(ಎ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ